ಅಪರಿಮಿತಸೈನ್ಯದಳ
	
ಅನಿರ್ದಿಷ್ಟ ಸಂಖ್ಯೆಯ ಒಂದು ಸಂಘಟನೆ ಅಥವಾ ಜನರ ಸಂಘವನ್ನು ಸೂಚಿಸಲು ಈಗ ಬಳಕೆಯಲ್ಲಿರುವ ಪದ (ಲೀಜನ್). ಹಿಂದೆ ಈ ಶಬ್ದ ಮುಖ್ಯವಾಗಿ ಪೌರಸೈನ್ಯವನ್ನು ಸೂಚಿಸುತ್ತಿತ್ತು. ಪುರಾತನ ರೋಮನ್ ಸೈನ್ಯದಲ್ಲಿ 3000-6000 ಪದಾತಿಗಳೂ ಸುಮಾರು 300 ಅಶ್ವಸೈನ್ಯವೂ ಇರುತ್ತಿದ್ದ ಸೈನ್ಯದಳಕ್ಕೆ ಲೀಜನ್ ಎನ್ನುತ್ತಿದ್ದರು. ಪರಾಚೀನ ರೋಮನ್ ರಲ್ಲಿ ಪೌರಸೇನಾ ಬಲವೇ ಯುದ್ಧಕ್ಕೆ ಹೊರಡುತ್ತಿತ್ತು. ಇದು ಎರಡನೆಯ ದರ್ಜೆಯದೆನಿಸಿಕೊಂಡ ಮಿಕ್ಕ ಸೇನಾದಳಗಳಿಗಿಂತ ಅಥವಾ ಸಹಾಯಕ (ಆಕ್ಸಿಲರಿ) ದಳಗಳಿಗಿಂತ ಭಿನ್ನವಾಗಿದ್ದು ಅತ್ಯಂತ ಶ್ರೇಷ್ಠ ಹಾಗೂ ವಿಲಕ್ಷಣ ಗುಣದ್ದಾಗಿತ್ತು. ಸಹಾನುಭೂತಿಯುಳ್ಳ ಅನಿಯುಕ್ತ ವಿದೇಶೀಯರನ್ನು ಸಾಮಾನ್ಯವಾಗಿ ಫಾರಿನ್ ಲೀಜನ್ ಎಂದು ಕರೆಯುತ್ತಾರೆ. ಸಣ್ಣ ಸಣ್ಣ ದೇಶಗಳು ತಮ್ಮ ಸ್ವಾತಂತ್ರ್ಯಕ್ಕೂ ಸ್ವಾವಲಂಬನಕ್ಕೂ ಹೋರಾಡುವಾಗ ಸಾಮಾನ್ಯವಾಗಿ ಅವುಗಳ ಜೊತೆಗೆ ಇವೂ ಸೇರಿಕೊಳ್ಳುತ್ತವೆ. ಬಹುಶಃ ಇದರ ಪ್ರಾಚೀನತಮ ಉದಾಹರಣೆಯೆಂದರೆ ಮೊದಲನೆಯ ಫ್ರಾನ್ಸಿಸ್ ರಚಿಸಿದ ಫ್ರೆಂಚ್ ಲೀಜನ್. ಹ್ಯಾನೋವರ್ ಪಟ್ಟಣವನ್ನು ಮುತ್ತಲು ನೆಪೋಲಿಯನ್ ಹವಣಿಸಿದಾಗ (1803) ಬ್ರಿಟನ್ ಸಜ್ಜುಗೊಳಿಸಿದ ಕಿಂಗ್ಸ್ ಜರ್ಮನ್ ಲೀಜನ್ ಎಂಬುದು ಅತ್ಯಂತ ಪ್ರಸಿದ್ಧವಾದ ಮತ್ತೊಂದು ಉದಾಹರಣೆ.									
(ಎ.ಎನ್.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ